ಪರ್ಕಿನ್, ವಿಲಿಯಮ್ ಹೆನ್ರಿ
1838-1907. ಆಂಗ್ಲ ರಸಾಯನ ವಿಜ್ಞಾನಿ. 1838 ಮಾರ್ಚ್ 12ರಂದು  ಲಂಡನ್ ನಗರದಲ್ಲಿ ಜನನ ಬಾಲ್ಯದಿಂದಲೇ ಇವನಿಗೆ ರಸಾಯನವಿಜ್ಞಾನದಲ್ಲಿ ವಿಶೇಷ ಆಸಕ್ತಿ. ಆದರೆ ಇವನು ಕಲಿಯುತ್ತಿದ್ದ ಲಂಡನ್ ಶಾಲೆಯಲ್ಲಿ ವಿಜ್ಞಾನಬೋಧನೆ ಇರಲಿಲ್ಲ. ಅಲ್ಲಿಯ ಅಧ್ಯಾಪಕರ ಪೈಕಿ ಒಬ್ಬನಾದ ಹಾಲ್ ಎಂಬಾತ ಭೋಜನವಿರಾಮದಲ್ಲಿ ರಸಾಯನ ವಿಜ್ಞಾನವನ್ನು ಕುರಿತು ವಾರಕ್ಕೆ ಎರಡು ಉಪನ್ಯಾಸಗಳನ್ನು ನೀಡುತ್ತಿದ್ದ. ಪರ್ಕಿನ್ ಊಟ ಬಿಟ್ಟಾದರೂ ಅವುಗಳಿಗೆ ಹಾಜರಾಗುತ್ತಿದ್ದ. ಇದನ್ನು ಗಮನಿಸಿದ ಹಾಲ್ ತನ್ನ ಉಪನ್ಯಾಸ ಕಾಲದಲ್ಲಿ ಪ್ರದರ್ಶಿಸುತ್ತಿದ್ದ ಪ್ರಯೋಗಗಳಿಗೆ ಸಹಾಯಕನಾಗಿ ಪರ್ಕಿನ್ ಅನ್ನು ನೇಮಿಸಿಕೊಂಡ.

ಪರ್ಕಿನ್ನನ ತಂದೆಯ ವೃತ್ತಿ ಕಟ್ಟಡ ಕಾಮಗಾರಿ ಎಂದೇ ಆತ ತನ್ನ ಮಗನ ಈ ರಸಾಯನವಿಜ್ಞಾನ ಗೀಳನ್ನು ಒಪ್ಪಲಿಲ್ಲ. ಆದರೆ ಹಾಲ್‍ನ ಮಧ್ಯಸ್ಥಿಕೆಯಿಂದಾಗಿ ಈ ಸಮಸ್ಯೆ ಬಗೆಹರಿದು ಪರ್ಕಿನ್ ರಾಯಲ್ ವಿಜ್ಞಾನ ಕಾಲೇಜ್ ಸೇರುವಂತಾಯಿತು. ಹದಿನೈದು ವರ್ಷ ವಯಸ್ಸಿನ ಈ ಹುಡಗನಿಗೆ ಆ ಕಾಲೇಜಿನಲ್ಲಿ ಜರ್ಮನ್ ರಸಾಯನವಿಜ್ಞಾನಿ ಹಾಫ್‍ಮನ್ನನ ಉಪನ್ಯಾಸಗಳನ್ನು ಕೇಳುವ ಅವಕಾಶ ಒದಗಿತು. ಪ್ರಸಿದ್ಧ ಹಾಫ್‍ಮನ್ನನಿಗೆ ತರುಣ ಪರ್ಕಿನ್ ಅಚ್ಚು ಮೆಚ್ಚಿನ ಶಿಷ್ಯನಾದದ್ದು ನಿರೀಕ್ಷಿತವೇ. ಕೇವಲ ಎರಡು ವರ್ಷಗಳಲ್ಲಿ ಇವನು ಹಾಫ್‍ಮನ್ನನ ಸಹಾಯಕನಾಗಿ ನೇಮಕಗೊಂಡ. ಇದರಿಂದ ಪರ್ಕಿನ್ನನ ವೈಯಕ್ತಿಕ ಸಂಶೋಧನೆಗಳಿಗೆ ವೇಳೆ ಸಾಲದೆ ಹೋಯಿತು. ತನಗೆ ಪ್ರಿಯವಾದ ರಾಸಾಯನಿಕ ಪ್ರಯೋಗಗಳನ್ನು ಸಂಜೆ ಹೊತ್ತು ನಡೆಸಲು ಅನುಕೂಲಿಸುವಂತೆ ಮನೆಯಲ್ಲೇ ಪ್ರಯೋಗಶಾಲೆಯನ್ನು ವ್ಯವಸ್ಥೆಗೊಳಸಿ ಅಲ್ಲಿ ಡೈನೈಟ್ರೊಬೆನ್ಸೀನ್ ಮತ್ತು ಡೈನೈಟ್ರೊನ್ಯಾಫ್ತಲೀನುಗಳನ್ನು ಅಪಕರ್ಷಿಸಿದಾಗ ಲಭಿಸುವ ಉತ್ಪನ್ನಗಳನ್ನು ಆರ್ಥರ್ ಚರ್ಚ್ ಎಂಬಾತನ ಸಹಚರ್ಯೆಯಲ್ಲಿ ಪರೀಕ್ಷಿಸತೊಡಗಿದ. ಎರಡನೆಯ ಪದಾರ್ಥದಿಂದ ಇವರಿಗೆ ಒಂದು ವರ್ಣದ್ರವ್ಯ ದೊರೆಯಿತು. ಅದಕ್ಕೆ ನೈಟ್ರೊಸೊನಾಫ್ತೈಲೀನ್ ಎಂಬ ಹೆಸರಿಟ್ಟರು. ಈ ವರ್ಣದ್ರವ್ಯವನ್ನು ರಂಗಾಗಿ ಬಳಸುವ ಸಾಧ್ಯತೆ ಸೀಮಿತವಾಗಿದ್ದರೂ ಇದು ಆಜೊ ರಂಗು ವರ್ಗದ ಮೊದಲ ಪ್ರತಿನಿಧಿಯಾಗಿತ್ತು. ಅದೇ ವೇಳೆಗೆ ಕ್ವಿನೈನನ್ನು ಕೃತಕವಾಗಿ ತಯಾರಿಸುವುದು ಯುಕ್ತವೆಂಬ ಸೂಚನೆ ಹಾಫ್‍ಮನ್ನನಿಂದ ಬಂತು. ಇದರ ಸಲುವಾಗಿ ಪರ್ಕಿನ್ ಮೊದಲು ಟಾಲುಡೀನನ್ನೂ ಅನಂತರ ಅನಿಲೀನ್ ಲವಣವನ್ನು ಪೊಟ್ಯಾಸಿಯಮ್ ಬೈಕ್ರೋಮೇಟಿನಿಂದ ಉತ್ಕರ್ಷಿಸಿದ ಉತ್ಪನ್ನ ಕ್ವಿನೈನ್ ಆಗಿರಲಿಲ್ಲ. ಬದಲಾಗಿ ಮಲಿನ ಕಪ್ಪು ಒತ್ತರ ದೊರೆಯಿತು. ಸ್ಪಷ್ಟ ಸ್ಫಟಿಕಾಕೃತಿಗಳುಳ್ಳ ಪದಾರ್ಥಗಳನ್ನು ಬಿಟ್ಟು ಉಳಿದ ಮಲಿನ ಕಪ್ಪು ಪದಾರ್ಥಗಳನ್ನೆಲ್ಲ  ನಿರುಪಯೋಗಿ ವಸ್ತುಗಳೆಂದು ಬಿಸಡುವುದು ಅಂದಿನ ಆಗ್ರ್ಯಾನಿಕ್ ರಸಾಯನವಿಜ್ಞಾನಿಗಳು ಪದ್ಧತಿಯಾಗಿತ್ತು. ಆದರೆ ಪರ್ಕಿನ್ ಹಾಗೆ ಮಾಡಲಿಲ್ಲ. ಆ ಪದಾರ್ಥವನ್ನು ಕೂಲಂಕಷವಾಗಿ ಪರೀಕ್ಷಿಸಿ ಅದರಿಂದ ಮಾವ್ ಅಥವಾ ಅನಿಲೀನ್ ಪರ್ಪಲ್ ಎಂಬ ಪ್ರಪ್ರಥಮ ರಂಗನ್ನು ಪ್ರತ್ಯೇಕಿಸಿದ. ಹೀಗಲ್ಲದೆ ಪರ್ಕಿನ್ ಏನಾದರೂ ಪರಿಶುದ್ಧ ಅನಿಲೀನ್ ಮೇಲೆ ಪ್ರಯೋಗ ನಡೆಸಿದ್ದ ಪಕ್ಷದಲ್ಲಿ ಈ ಅಮೂಲ್ಯ ರಂಗಿನ ಪತ್ತೆಯಾಗುತ್ತಿರಲಿಲ್ಲ ಎನ್ನುವುದುಂಟು ಇದು ಸರಿಯಲ್ಲ. ಆದರೆ ಮಜೆಂಟ ರಂಗಿನ ವಿಷಯದಲ್ಲಿ ಇದು ಸತ್ಯ. ಪ್ರಯೋಗದಲ್ಲಿ ಬಳಸಿದ ಅನಿಲೀನ್ ಟಾಲುಡೀನಿನಿಂದ ಕಲುಷಿತವಾಗಿರದಿದ್ದರೆ ಮಜೆಂಟ ಉಂಟಾಗುತ್ತಿರಲಿಲ್ಲ. ತತ್‍ಕ್ಷಣವೇ ಪರ್ಕಿನ್ ಈ ರಂಗಿನ ಪ್ರತಿಚಯವನ್ನು ಪರ್ತ್‍ನಲ್ಲಿದ್ದ ರಂಗಾರೆ ಕಂಪನಿಯೊಂದಕ್ಕೆ ಕಳುಹಿಸಿ ಅದನ್ನು ರೇಷ್ಮೆಯ ಮೇಲೆ ಪ್ರಯೋಗಿಸಿ ನೋಡಬೇಕೆಂದು ವಿನಂತಿಸಿಕೊಂಡ ಅವರ ವರದಿ ಉತ್ತೇಜನಕಾರಿಯಾಗಿತ್ತು. ಆದರೆ ಮಾವ್ ರಂಗು ಹತ್ತಿಯ ಬಟ್ಟೆಗೆ ಮಾತ್ರ ಅಂಟುತ್ತಿರಲಿಲ್ಲ. (ಅಂದು ವರ್ಣಬಂಧಕಗಳ ಉಪಯೋಗ ಗೊತ್ತಿರಲಿಲ್ಲ.) ಇದರಿಂದ ನಿರಾಶನಾಗದೆ ಪರ್ಕಿನ್ ಮಾವ್ ರಂಗಿನ ಏಕಸ್ವವನ್ನು ಪಡೆದು ಅನತಿ ಕಾಲದಲ್ಲಿ ಹತ್ತಿನೂಲಿಗೂ ಅದು ಅಂಟಿಕೊಳ್ಳುವಂತೆ ಮಾಡಬಲ್ಲ ಯುಕ್ತವರ್ಣಬಂಧಕಗಳನ್ನು ಶೋದಿಸಿದ.

ಮಾವ್ ರಂಗನ್ನು ವಾಣಿಜ್ಯ ಗಾತ್ರದಲ್ಲಿ ತಯಾರಿಸುವ ಯೋಜನೆಗೆ ಪರ್ಕಿನ್ನನ ತಂದೆಯೂ ಒಪ್ಪಿ ಆರ್ಥಿಕ ನೆರವು ನೀಡಲು ಮುಂದಾದ. ಆದರೆ ಅವನ ಗುರು ಹಾಫ್‍ಮನ್ನನ ಅಭಿಪ್ರಾಯ ಪ್ರತಿಕೂಲವಾಗಿತ್ತು. ಆದಾಗ್ಯೂ ತಂದೆ ಮಕ್ಕಳು ಅದನ್ನು ಉತ್ಪಾದಿಸಲು ಸಿದ್ಧರಾದರು. ಈ ಉದ್ಯಮ ವ್ಯಾವಹಾರಿಕವಾಗಲಾರದು ಎಂಬ ಹಾಫ್‍ಮನ್ನ ಅಭಿಪ್ರಾಯವನ್ನು ಟೀಕಿಸುವಂತಿಲ್ಲ. ಏಕೆಂದರೆ ತಂದೆ ಕೇವಲ ಕಟ್ಟಡದ ಕಂಟ್ರಾಕ್ಟರ್, ರಸಾಯನವಿಜ್ಞಾನದ ಓನಾಮ ತಿಳಿಯದವ ಮಗನಿಗಾದರೊ ಕಾರ್ಖಾನೆಯ ಆಡಳಿತದ ಪರಿಚಯವಿರಲಿಲ್ಲ ಮತ್ತು ವ್ಯವಹಾರ ಮರ್ಮ ಗೊತ್ತಿರಲಿಲ್ಲ. ಇಂಥವರು ಒಂದು ದೊಡ್ಡ ಉತ್ಪಾದನಘಟಕವನ್ನು ಯಶಸ್ವಿಯಾಗಿ ನಡೆಸಬಲ್ಲರೇ ಎಂದು ಹಾಫ್‍ಮನ್ ಸಂದೇಹಿಸಿದ್ದು ಸ್ವಾಭಾವಿಕವೇ. ಆದರೆ ವಾಸ್ತವವಾಗಿ ಇದು ಅಂಥ ಸಮಸ್ಯೆ ಆಗಿರಲಿಲ್ಲ. ಏಕೆಂದರೆ ಅಂದಿನ ಯಾವ ಕಾರ್ಖಾನೆಯ ಯಾವ ರೂಪ ರೇಷೆಯನ್ನಾಗಲೀ ತಾಂತ್ರಿಕ ವಿನ್ಯಾಸವನ್ನಾಗಲೀ ಅನುಕರಣೆಮಾಡಿ ಮಾವ್‍ರಂಗಿನ ಘಟಕವನ್ನು ನಿರ್ಮಿಸುವಂತಿರಲಿಲ್ಲ. ಇದರ ತಯಾರಿಕೆಗೆ ವಿಶೇಷ ಉಪಕರಣ ಮತ್ತು ತಾಂತ್ರಿಕ ಕೌಶಲದ ಅಗತ್ಯವಿತ್ತು. ಪರ್ಕಿನ್ ಮತ್ತು ಸಹೋದ್ಯೋಗಿಗಳು ಎದುರಿಸಬೇಕಾಗಿ ಬಂದ ಪ್ರಾಯೋಗಿಕ ಸಮಸ್ಯೆಗಳು ರಂಗಿನ ಆವಿಷ್ಕಾರದ ಸಮಯದಲ್ಲಿ ಬಗೆಹರಿಸಿದ. ಸಮಸ್ಯೆಗಳಿಗಿಂತ ಮಿಗಿಲಾಗಿದ್ದುವು. ರಂಗಿನ ತಯಾರಿಕೆಗೆ ಅಗತ್ಯವಾಗಿದ್ದ ಕಚ್ಚಾಮಾಲುಗಳು ವಿರಳವಾಗಿದ್ದುವು. ಆದ್ದರಿಂದ ಅವರು ಮೊದಲು ಬೆನ್ಸೀನಿನಿಂದ ಅನಿಲೀನ್ ತಯಾರಿಕೆಯ ವಿಧಾನವನ್ನು ರೂಪಿಸಬೇಕಾಯಿತು. ಸಾಕಷ್ಟು ಮೊತ್ತದ ಬೆನ್ಸೀನನ್ನು ಕಲೆಹಾಕುವುದೂ ಸುಲಭವಾಗಿರಲಿಲ್ಲ. ಪರ್ಕಿನ್ ಮತ್ತು ಅವನ ಸಹೋದರ ದೇಶಾದ್ಯಂತ ಸಂಚರಿಸಿ ಕೊನೆಗೆ ಗ್ಯಾಲನ್ ಒಂದಕ್ಕೆ 1.25 ಪೌಂಡ್ ತೆತ್ತು ಅಗತ್ಯವಿದ್ದಷ್ಟು ಬೆನ್ಸೀನನ್ನು ಸಂಗ್ರಹಿಸಿದರಂತೆ. ಆದರೆ ಅದರ ಗುಣಮಟ್ಟ ಕೀಳಾಗಿದ್ದುದರಿಂದ ಅದನ್ನು ಪುನರಾಸವಿಸಿ ಶುದ್ಧೀಕರಿಸಬೇಕಾಯಿತು.

ಬೆನ್ಸೀನನ್ನು ನೈಟ್ರೊಬೆನ್ಸೀನಿಗೆ ಪರಿವರ್ತಿಸಲು ಸಾರಯುತ ನೈಟ್ರಿಕ್ ಆಮ್ಲ ಅಗತ್ಯವಷ್ಟೆ. ಇದು ಕೂಡ ಆಗ ಅಲಭ್ಯವಾಗಿದ್ದುದರಿಂದ ಇದೇ ಉತ್ಪಾದನೆಗೆ ಸ್ಥಾವರವನ್ನು ಸ್ಥಾಪಿಸಲಾಯಿತು. ಅಂತಿಮವಾಗಿ ನೈಟ್ರೊಬೆನ್ಸೀನನ್ನು ಅನಿಲೀಲಿಗೆ ಅಪಕರ್ಷಿಸಲು ಬೇಕಾದ ಉಪಕರಣ ಮತ್ತು ತಾಂತ್ರಿಕ ವಿವರಗಳನ್ನು ಶೋಧಿಸಲಾಯಿತು. ಕೇವಲ ಆರು ತಿಂಗಳುಗಳಲ್ಲಿ ಅನಿಲೀನ್ ಪರ್ಪಲ್ ಅಥವಾ ಟೆರಿಯನ್ ಪರ್ಪಲ್ ಸಿದ್ಧವಾಯಿತು. ಇಂಗ್ಲೆಂಡ್ ಮತು ಫ್ರಾನ್ಸುಗಳಲ್ಲಿ ಅದರ ಉತ್ಪಾದನೆ ಬಿರುಸಿನಿಂದ ಪ್ರಾರಂಭವಾಯಿತು. ಹದಿನೆಂಟರ ಹರೆಯದ ಬಾಲಕ ಇಷ್ಟೆಲ್ಲ ಸಾಧಿಸಿದನೆಂದರೆ ಶ್ಲಾಘನೀಯವೇ. ಆದರೆ ರಂಗಿನ ಮಹತ್ವವನ್ನು ಅರಿತು ಅದನ್ನು ಸಾರ್ವತ್ರಿಕ ಬಳಕೆಗೆ ತಂದವರು ಫ್ರೆಂಚರು ! ಅದನ್ನು ಮಾವ್ ಎಂದು ಕರೆದವರೂ ಅವರೇ. ಇಂದಿಗೂ ಅದಕ್ಕೆ ಇದೇ ಹೆಸರು ಉಳಿದಿದೆ. ಫ್ರೆಂಚ್ ವಸ್ತ್ರವಿನ್ಯಾಸಗಳಲ್ಲಿ ಮಾವ್ ರಂಗು ಕಾಣಿಸಿಕೊಳ್ಳುವ ತನಕ ಆಂಗ್ಲ ಕ್ಯಾಲಿಕೊ ಮುದ್ರಕರು ಅದರಲ್ಲಿ ಆಸಕ್ತಿ ತಳೆಯಲಿಲ್ಲ ಎಂಬುದಾಗಿ ಪರ್ಕಿನ್‍ನೊಂದು ನುಡಿದಿದ್ದಾನೆ.

ವಿನೂತನ ರಾಸಾಯನಿಕ ಉತ್ಪಾದನೆ ಮತ್ತು ಅದರ ಸಲುವಾಗಿ ಹೊಸ ಉದ್ಯಮವನ್ನು ಪ್ರಾರಂಭಿಸುವಾಗ ಸಾಮಾನ್ಯವಾಗಿ ತಲೆದೋರುವ ಎಡರು ತೊಡರುಗಳ ಜೊತೆಗೆ ಈ ಹೊರ ರಂಗನ್ನು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿ ಮಾಡಲು ಪರ್ಕಿನ್ ಪಟ್ಟಕಷ್ಟ ಅಷ್ಟಿಷ್ಟಲ್ಲ. ಬೃಹತ್ ಗಾತ್ರದಲ್ಲಿ ರೇಷ್ಮೆಗೆ ಈ ರಂಗವನ್ನು ಹಚ್ಚಲು ಪ್ರಯತ್ನಿಸಿದಾಗ ಇದು ನೂಲಿಗೆ ಏಕರೀತಿಯಲ್ಲಿ ಅಂಟಲಿಲ್ಲ. ಅಂದರೆ ಒಂದೆಡೆ ಹೆಚ್ಚು ಅಂಟಿಕೊಂಡರೆ ಇನ್ನೊಂದು ಕಡೆ ಕಡಿಮೆ ಬಣ್ಣ ಅಂಟಿಕೊಳ್ಳುತ್ತಿತ್ತು. ಈ ನ್ಯೂನತೆಯನ್ನು ನಿವಾರಿಸಲು ಅವನು ವಾರಗಟ್ಟಲೆ ಹೆಣಗಿ ಕೊನೆಗೆ ಸಾಬೂನು ದ್ರಾವಣದ ಸಂಪರ್ಕನಲ್ಲಿ ರಂಗು ರೇಷ್ಮೆಗೆ ಏಕರೀತಿಯವಾಗಿ ಅಂಟುವುದೆಂದು ತೋರಿಸಿದ. ಇದರಿಂದ ಮುಂದೆ ಮಜೆಂಟ, ಹಾಫ್‍ಮನ್ ವಯೊಲೆಟ್ ಮುಂತಾದ ರಂಗುಗಳ ಲೇಪನಕ್ಕೆ ಹಾದಿ ಸುಗಮವಾಯಿತು.

ಇಂಥ ಸಂದರ್ಭಗಳಲ್ಲಿ ವಾಡಿಕೆಯಾಗಿರುವಂತೆ ಕಪಟಿಗಳು ಪರ್ಕಿನ್ನನ ಏಕಸ್ವವನ್ನು ದುರುಪಯೋಗಪಡಿಸಿಕೊಳ್ಳಲು ಹವಣಿಸಿದರು. ಪರಿಣಾಮವಾಗಿ ಮಾವ್‍ರಂಗಿನ ತಯಾರಿಕೆಗೆ ಸುಲಭವಾದ ಪರ್ಯಾಯ ವಿಧಾನಗಳು ಹುಟ್ಟಿಕೊಂಡುವು. ಆದರೆ ಇವುಗಳಿಂದ ಬಂದ ಉತ್ಪನ್ನ ಪರ್ಕಿನ್ನನ ಬೈಕ್ರೋಮೇಟ್ ವಿಧಾನದಿಂದ ತಯಾರಿಸಿದ ಉತ್ಪನ್ನದ ಗುಣ ಮಟ್ಟಕ್ಕೆ ಸಾಟಿಯಾಗದೆ ಹೋದ್ದರಿಂದ ಅವನ ಉದ್ಯಮಕ್ಕೆ ತೊಂದರೆ ಆಗಲಿಲ್ಲ.

ಮಾವ್ ರಂಗಿನ ಶೋಧ ಕಲ್ಲಿದ್ದಲ ಡಾಂಬರಿನಿಂದ ಇತರ ರಂಗುಗಳನ್ನು ತಯಾರಿಸಲು ಪ್ರೇರಕವಾಯಿತು. ಮಜೆಂಟ ರಂಗಿನ ಆವಿಷ್ಕಾರವಾದುದು. ಹೀಗೆ, ಪರ್ಕಿನ್ನನ ಗ್ರೀನ್‍ಫರ್ಡ್ ರಂಗುಕಾರ್ಖಾನೆ ಪ್ರಾರಂಭವಾಗಿ ಸುಮಾರು ಐದು ವರ್ಷಗಳ ತರುವಾಯ ಹಾಫ್‍ಮನ್ ಮಜೆಂಟವನ್ನು ಎಥಿಲೇಟ್ ಅಥವಾ ಮೆಥಿಲೇಟ್ ಮಾಡಿ (ಅಂದರೆ ಅದರ ಅಣುವಿಗೆ ಈಥೈಲ್ ಅಥವಾ ಮೀಥೈಲ್ ಗುಚ್ಛಗಳನ್ನು ಸೇರಿಸಿ) ಹಾಫ್‍ಮನ್ ವಯೋಲೆಟ್ಸ್ ಎಂಬ ನೇರಿಳೆ ಬಣ್ಣಗಳ ಒಂದು ಶ್ರೇಣಿಯನ್ನೇ ತಯಾರಿಸಿದ. ಸ್ವಲ್ಪ ಕಾಲಾನಂತರ ರೋಸನಿಲೀನ್ ರಂಗುಗಳು ಪತ್ತೆಯಾದವು. ಅಂತಿಮವಾಗಿ ಮೀಥೈಲ್ ವಯೋಲೆಟ್ ಮತ್ತು ಇತರ ರಂಗುಗಳು ಮಾರುಕಟ್ಟೆಗೆ ಬಂದಾಗ ಮಾವ್ ರಂಗು ತೀವ್ರಸ್ಪರ್ಧೆಯನ್ನು ಎದುರಿಸಬೇಕಾಯಿತು. ಈ ಹೊಸ ಥಳಥಳಿಸುವ ರಂಗುಗಳಿಗೆ ಮಾರುಹೋದ ಜನ ಅವು ಬಹುಕಾಲ ಉಳಿಯವು ಎಂದು ಅರಿಯದೆ ಹೋದರು. ತತ್ಫಲಿತವಾಗಿ ಮಾವ್‍ರಂಗಿನ ಉತ್ಪಾದನೆ ಕುಂಠಿತವಾಗಿ ಉತ್ತರೋತ್ತರ ನಿರ್ನಾಮವಾಗಿ ಹೋಯಿತು.

ಇಷ್ಟಾದರೂ ಪರ್ಕಿನ್ ತನ್ನ ಕಾರ್ಖಾನೆಯನ್ನು ಮುಚ್ಚಲಿಲ್ಲ. ಮಜೆಂಟವನ್ನು ಆಲ್ಕೈಲೀಕರಣಮಾಡುವ ಹೊಸ ವಿಧಾನವನ್ನು ರೂಪಿಸಿದ ಪರಿಣಾಮವಾಗಿ ನೀಲಿ ಬಣ್ಣದ ವಿವಿಧ ಛಾಯೆಗಳಿರುವ ರಂಗುಗಳ ಒಂದು ಶ್ರೇಣಿಯನ್ನೇ ತಯಾರಿಸಿ ಬ್ರಿಟ್ಯಾನಿಯ ವಯೊಲೆಟ್ಸ್ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆಮಾಡಿದ. ಇವು ಇತರ ರಂಗುಗಳೊಡನೆ ಸ್ಪರ್ಧಿಸಲು ಸಮರ್ಥವಾಗಿದ್ದುವು. 1868ರಲ್ಲಿ ಗ್ರಾಬೆ ಮತ್ತು ಲೀಬರ್‍ಮನ್ನರು ಮ್ಯಾಡರ್ ಬಳ್ಳಿಯಿಂದ ಅಲಿಜಾರಿನ್ ಎಂಬ ನೈಸರ್ಗಿಕ ರಂಗನ್ನು ಪ್ರತ್ಯೇಕಿಸಿದುದು ಪರ್ಕಿನ್ನನಿಗೆ ವರವಾಗಿ ಪರಿಣಮಿಸಿತು. ಏಕೆಂದರೆ ಅವರು ಅನುಸರಿಸಿದ ವಿಧಾನ ವ್ಯಾವಹಾರಿಕವಾಗಿರಲಿಲ್ಲ. ಆದ್ದರಿಂದ ಅದನ್ನು ಸಂಶ್ಲೇಷಿಸಲು ಪರ್ಕಿನ್ ಸಿದ್ಧನಾದ ಅಲಿಜಾರಿನ್ನಿನ ಸಂಶ್ಲೇಷಣೆಗೆ ಆಂತ್ರಸೀನ್ ಪ್ರಾರಂಭಿಕ ಪದಾರ್ಥ. ಕಲ್ಲಿದ್ದಲ ಡಾಂಬರಿನಲ್ಲಿರುವ ರಾಸಾಯನಿಕವಿದು. ಹಾಫ್‍ಮನ್ನನ ಬಳಿ ಶಿಷ್ಯವೃತ್ತಿ ಮಾಡುತ್ತಿದ್ದಾಗಲೇ ಪರ್ಕಿನ್ನನಿಗೆ ಇದರ ಪರಿಚಯವಿತ್ತು. ಕೂಡಲೇ ಕಾರ್ಯೋನ್ಮುಖನಾದ ಪರ್ಕಿನ್ ಕೇವಲ ಒಂದು ವರ್ಷದಲ್ಲಿ ಅಲಿಜಾರಿನ್ ರಂಗಿನ ವಾಣಿಜ್ಯ ತಯಾರಿಕೆಗೆ ಯೋಗ್ಯವಾದ ವಿಧಾನವನ್ನು ರೂಪಿಸಿದ. ಇಲ್ಲಿ ಸಹ ಮೂಲ ಕಚ್ಚಾವಸ್ತುವಾದ ಆಂತ್ರಸೀನನ್ನು ಸಂಗ್ರಹಿಸುವುದು ದೊಡ್ಡ ಸಮಸ್ಯೆಯಾಯಿತು. ಆದರೂ 1871ರ  ಸುಮಾರಿಗೆ ಪರ್ಕಿನ್ನನ ಕಂಪನಿ ವರ್ಷಂಪ್ರತಿ 220 ಟನ್ನುಗಳಷ್ಟು ಅಲಿಜಾರಿನ್ನನ್ನು ಉತ್ಪಾದಿಸುತ್ತಿತ್ತೆಂದು ವರದಿ. 1873ರ ವೇಳೆಗೆ ಅಲಿಜಾರಿನ್ ಉತ್ಪಾದನೆಯಲ್ಲಿ ವಿಶೇಷ ಪ್ರಗತಿ ಉಂಟಾಯಿತು. ಗ್ರೀನ್‍ಫರ್ಡ್ ಕಾರ್ಖಾನೆಯಲ್ಲಿ ತೀವ್ರ ಸುಧಾರಣೆಗಳನ್ನು ಮಾಡಿದ ಹೊರತು ತಮಗೆ ಉಳಿಗಾಲವಿಲ್ಲ ಎಂದು ಪರ್ಕಿನ್ನನಿಗೆ ಮನವರಿಕೆಯಾಯಿತು. ಅಷ್ಟು ಬಂಡವಾಳ ಹೂಡುವ ತ್ರಾಣವಿಲ್ಲದುದುರಿಂದ ನಿರ್ವಾಹವಿಲ್ಲದೆ ಕಾರ್ಖಾನೆಯನ್ನು ಮಾರಲಾಯಿತು. ಬಂದ ಹಣ ಅಜೀವಪರ್ಯಂತ ತನ್ನ ಉದರಂಭರಣಕ್ಕೆ ಸಾಕಾಗುವಷ್ಟು ಇದ್ದುದರಿಂದ ಪರ್ಕಿನ್ ಉದ್ಯಮದಿಂದ ನಿವೃತ್ತನಾಗಿ ಮೂಲ ಸಂಶೋಧನೆಗಳಲ್ಲಿ ನಿರತನಾಗಲು ನಿರ್ಧರಿಸಿದ. ಆಗ ಅವನಿಗೆ ಮೂವತ್ತಾರರ ಹರೆಯ.

ಹಾಗೆಂದ ಮಾತ್ರಕ್ಕೆ ಉದ್ಯಮದಿಂದ ವಿಶ್ರಮಿಸಿದ ಅನಂತರವೇ ಅವನು ಮೂಲ ಸಂಶೋಧನೆಗಳಲ್ಲಿ ಆಸಕ್ತನಾದುದು ಎಂದು ಭಾವಿಸಲಾಗದು. ತನ್ನ ಗ್ರೀನ್‍ಫರ್ಡ್ ಕಾರ್ಖಾನೆಯನ್ನು ಪ್ರಾರಂಭಿಸಿದ ತರುಣದಲ್ಲೆ ಅವನು ಆಗ್ರ್ಯಾನಿಕ್ ರಸಾಯನವಿಜ್ಞಾನದಲ್ಲಿ ಮೂಲ ಸಂಶೋಧನೆಗಳನ್ನು ಮಾಡಲುಹೊರಟ್ಟಿದ್ದ. ಆಗಲೇ ಅವನು ಪ್ರಪ್ರಥಮ ಅಮೈನೊ ಆಮ್ಲವಾದ ಗ್ಲೈಕೊಕಾಲನ್ನು ಶೋಧಿಸಿದುದು. ಇದು ರಸಾಯನಿಕವಾಗಿ ಮೈನೊ ಅಸಿಟಿಕ್ ಆಮ್ಲವಾದ್ದರಿಂದ ಬ್ರೋಮಸಿಟಿಕ್ ಆಮ್ಲವನ್ನು ಅಮೋನಿಯದೊಡನೆ ಕಾಸಿದಾಗ ಉಂಟಾಗುವುದೆಂದು ಪರ್ಕಿನ್ ಪ್ರದರ್ಶಿಸಿದ. ಡ್ಯೂಪ ಎಂಬ ಸಹೋದ್ಯೋಗಿಯೊಡಗೂಡಿ ಇವನು ಟಾರ್ಟಾರಿಕ್, ಫ್ಯುಮಾರಿಕ್ ಮತ್ತು ಮಲೇಯಿಕ್ ಆಮ್ಲಗಳ ನಡುವಣ ಸಂಬಂಧವನ್ನು ತೋರಿಸಿಕೊಟ್ಟನಲ್ಲದೆ ಡೈಬ್ರೋಮೊ ಸಕ್ಸಿನಿಕ್ ಆಮ್ಲದಿಂದ ರೆಸೆಮಿಕ್ ಆಮ್ಲವನ್ನು ಸಂಶ್ಲೇಷಿಸಿದ ಕೂಡ.

ಮುಂದೆ ಪರ್ಕಿನ್ನನ ಗಮನ ಆರೊಮ್ಯಾಟಿಕ್ ಆಲ್ಡಿಹೈಡುಗಳ ಕಡೆ ಹರಿಯಿತು. ಅವುಗಳ ಮೇಲೆ ಅಸಿಟಿಕ್ ಆನ್‍ಹೈಡ್ರಿಡಿನ ಪರಿಣಾಮವನ್ನು ಪರಿಶೀಲಿಸುತ್ತಿದ್ದಾಗ ಪ್ರಸಿದ್ಧವಾದ ಪರ್ಕಿನ್ ಸಂಶ್ಲೇಷಣೆ ಎಂಬ ಕ್ರೀಯೆ ರೂಪುಗೊಂಡಿತು. ಬೆನ್ಸಾಲ್ಡಿಹೈಡನ್ನು ಯುಕ್ತಪ್ರಯೋಗ ಪರಿಸ್ಥಿತಿಗಳಲ್ಲಿ ಅಸಿಟಿಕ್ ಅನ್‍ಹೈಡ್ರೈಡ್ ಮತ್ತು ನಿರ್ಜಲ ಸೋಡಿಯಮ್ ಅಸಿಟೇಟುಗಳೊಡನೆ ಕಾಸಿದಾಗ ಸಿನಮಿಕ್ ಆಮ್ಲವೆಂಬ ಅಪರ್ಯಾಪ್ತ ಆರೊಮ್ಯಾಟಿಕ್ ಆಮ್ಲ ಉಂಟಾಗುವುದು ಪರ್ಕಿನ್ ಸಂಶ್ಲೇಷಣೆಗೆ ನಿದರ್ಶನ ಇದೇ ಕಾರ್ಯವಿಧಾನವನ್ನು ಅನುಸರಿಸಿ ಈತ ಕುಮರಿನನ್ನು ಸಂಶ್ಲೇಷಿಸಿದ ಇದು ಪ್ರಪ್ರಥಮ ಸಂಶ್ಲೇಷಿತ ಪರಿಮಳ. ಸಿನಮಿಕ್ ಆಮ್ಲದ ಸಂಶ್ಲೇಷಣೆ ಇಂಡಿಗೊ ಸಂಶ್ಲೇಷಣೆಗೆ ನಾಂದಿಯಾಯಿತು. ಮೊತ್ತಮೊದಲು ಬೇಯರ್ ಇಂಡಿಗೂ ಸಂಶ್ಲೇಷಿಸಿದುದು ಇದರಿಂದಲೇ.

ಪರ್ಕಿನ್ ಉದ್ಯಮನಿರತನಾಗಿದ್ದಾಗ ಆತನ ಸಂಶೋಧನಕಾಯ ಗ್ರೀನ್‍ಫಡ್ ಕಾರ್ಖಾನೆಯ ಪಕ್ಕ ಒಂದು ಮನೆಯಲ್ಲಿದ್ದ ಪ್ರಯೋಗಶಾಲೆಯಲ್ಲಿ ನಡೆಯುತ್ತಿತ್ತು. ಇಲ್ಲಿ ಚರ್ಚ್ ಎಂಬ ಸಹಕಾರ್ಯಕರ್ತನೊಂದಿಗೆ ವರ್ಣದ್ರವ್ಯಗಳು ಮತ್ತು ರಂಗುಗಳು ಆಂತರಿಕ ರಚನೆಯ ಬಗ್ಗೆ ಸಂಶೋಧಿಸುತ್ತಿದ್ದ. ಹೀಗೆ ಪರ್ಕಿನ್ ಒಬ್ಬ ಜಾದೂಗಾರನಂತೆ ಏಕಕಾಲದಲ್ಲಿ ಮೂರು ದಿಸೆಗಳಲ್ಲಿ ಕಾರ್ಯೋನ್ಮುಖನಾದ್ದ : ರಂಗುಗಳ ಉತ್ಪಾದನೆ ವಿಧಾನಗಳ ಅಧ್ಯಯನ, ಅವುಗಳ ಅಂತರಿಕ ರಚನೆಯ ಶೋಧ ಮತ್ತು ಆಗ್ರ್ಯಾನಿಕ್ ಸಂಯುಕ್ತಗಳ ಸಂಶ್ಲೇಷಣೆ.

ಉದ್ಯಮದಿಂದ ವಿಶ್ರಮಿಸಿದ ಮೇಲೆ ಪರ್ಕಿನ್ ವಾಸಕ್ಕಾಗಿ ಸಡ್‍ಬರಿಯಲ್ಲಿ ಮನೆ ಕಟ್ಟಿಸಿಕೊಂಡ. ಹಿಂದಿದ್ದ ಮನೆ ಪ್ರಯೋಗಶಾಲೆಯಾಯಿತು. ಇಲ್ಲಿಯೇ ಅವನು ಕೊನೆಯ ತನಕ ಸಂಶೋಧನೆಗಳನ್ನು ನಡೆಸಿದ್ದು. ಆಗ್ರ್ಯಾನಿಕ್ ಸಂಯುಕ್ತಗಳ ಕಾಂತೀಯ ಭ್ರಾಮಕ ಸಾಮಥ್ರ್ಯಕ್ಕೂ ಅವುಗಳ ಆಂತರಿಕ ರಚನೆಗೂ ನಿಕಟ ಸಂಬಂಧವಿದೆ ಎಂಬುದನ್ನು 1881ರಲ್ಲಿ ಅವನು ರುಜುವಾತುಪಡಿಸಿದ. ಇದೊಂದು ಮಹತ್ಸಾಧನೆ. ಸುಮಾರು ಇಪ್ಪತೈದು ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಅವನು ನಡೆಸಿದ ಸಂಶೋಧನೆಗಳಿಂದ ಅನೇಕ ಆಗ್ರ್ಯಾನಿಕ್ ಸಂಯುಕ್ತಗಳ ಆಂತರಿಕ ರಚನೆಗಳು ಗೊತ್ತಾದುವು. 

ಪರ್ಕಿನ್ನನ ವೈಯಕ್ತಿಕ ಜೀವನ ಸಾಧಾರಣ. ವಿಜ್ಞಾನಕ್ಕೆ ಮತ್ತು ತನ್ನ ಕುಟುಂಬಕ್ಕೆ ಅವನು ಸಂಪೂರ್ಣನಿಷ್ಠನಾಗಿದ್ದ. ಹಲವು ವಿಜ್ಞಾನ ಸಂಘಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಬಿಟ್ಟರೆ ಅವನಿಗೆ ಇನ್ನಾವ ಹವ್ಯಾಸಗಳೂ ಇರಲಿಲ್ಲ. ಅವನು ಲಗ್ನವಾದಾಗ ಇಪ್ಪತ್ತೊಂದರ ಹರೆಯ. ಪತ್ನಿ ಜೆಮಿಯ ಹ್ಯಾರಿಯೆಟ್ ಲಿಸೆಟ್ ಇಬ್ಬರು ಗಂಡು ಮಕ್ಕಳಿಗೆ ಜನ್ಮವಿತ್ತು ಕಾಲವಾದಳು. ನಾಲ್ಕು ವರ್ಷಗಳ ತರುವಾಯ ಪರ್ಕಿನ್ ಹೆಣ್ಣುಮಕ್ಕಳಾದುವು. ಪರ್ಕಿನ್ನನ ಮೂವರು ಗಂಡುಮಕ್ಕಳ ಪೈಕಿ ವಿಲಿಯಮ್ ಹೆನ್ರಿ ಮತ್ತು ಆರ್ಥರ್ ಜಾರ್ಜ್ ಮುಂದೆ ವಿಖ್ಯಾತ ರಸಾಯನವಿಜ್ಞಾನ ಪ್ರಾಧ್ಯಾಪಕರು ಎನಿಸಿಕೊಂಡರು. ನೂಲಿನ ಮೇಲೆ ನಿರ್ದಿಷ್ಟ ತವರದ ಲವಣಗಳ ಒತ್ತರಿಸುವಂತೆ ಮಾಡಿದರೆ ಅದಕ್ಕೆ ಅಗ್ನಿನಿರೋಧಕ ಗುಣಪ್ರಾಪ್ತವಾಗುವುದೆಂಬುದು ವಿಲಿಯಮ್ ಹೆನ್ರಿಯ ಸಂಶೋಧನೆಗಳ ಪೈಕಿ ಒಂದು. ಎರಡನೆಯ ಮಗನಾದ ಆರ್ಥರ್ ಜಾರ್ಜ ಹಿರಿಯನಷ್ಟು ಪ್ರಸಿದ್ದಿಗೆ ಬಾರದಿದ್ದರೂ ಪ್ರಾಧ್ಯಾಪಕನಾಗಿ ನೈಸರ್ಗಿಕ ವರ್ಣದ್ರವ್ಯಗಳ ಶೋಧದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾನೆ.

ಸ್ವಭಾವತಃ ಪ್ರಚಾರಪ್ರಿಯನಲ್ಲದ ಪರ್ಕಿನ್ನನಿಗೆ ನ್ಯಾಯವಾಗಿ ಸಿಗಬೇಕಾಗಿದ್ದ ಮನ್ನಣೆ ದೊರೆಯದಿದ್ದುದು ಅಚ್ಚರಿಯೇನಲ್ಲ. ಅವನ ವಿಜ್ಞಾನಮಿತ್ರರು ಅವನ ಮೂಲ ಸಂಶೋಧನೆಗಳನ್ನು ಮೆಚ್ಚಿ ಗೌರವಿಸುತ್ತಿದ್ದರೂ ಉದ್ಯಮ ಕ್ಷೇತ್ರದ ಅವನ ಸಮಕಾಲೀನ ಕಾರ್ಯಕರ್ತರು ಅಸೂಯಾಪರರಾಗಿದ್ದಂತೆ ತೋರುವುದು. ರಂಗು ಉದ್ಯಮದ ಆದಿಪ್ರವರ್ತಕನಾದ ಪರ್ಕಿನ್ನನ್ನು ಅವರೆಂದೂ ಸನ್ಮಾನಿಸಿದ ಉಲ್ಲೇಖವಿಲ್ಲ. ಇದು ಸಮಕಾಲೀನ ವಿಜ್ಞಾನಸಾಹಿತ್ಯದಿಂದ ವಿದಿತ. ಆದರೆ ಅವನು ಸಂಪರ್ಕವಿಟ್ಟು ಕೊಂಡಿದ್ದ ವಿಜ್ಞಾನಸಂಸ್ಥೆಗಳು ಅವನ ಹಿರಿಮೆಯನ್ನು ಗುರುತಿಸುವುದರಲ್ಲಿ ಹಿಂದೆ ಬೀಳಲಿಲ್ಲ. ರಾಯಲ್ ಸೊಸೈಟಿಯ ಉಪಾಧ್ಯಕ್ಷ ಸ್ಥಾನ ಮತ್ತು ರಾಸಾಯನಿಕ ಸೊಸೈಟಿಯ ಅಧ್ಯಕ್ಷ ಸ್ಥಾನ ಲಭಿಸಿದ್ದು ಇದಕ್ಕೆ ನಿದರ್ಶನ. ಮಾವ್‍ರಂಗಿನ ಆವಿಷ್ಕಾರದ ಸ್ವರ್ಣ ಮಹೋತ್ಸವಕ್ಕಾಗಿ ಅದ್ದೂರಿಯ ಏರ್ಪಾಡುಗಳಾದುವು. ಮುಖ್ಯ ಸಮಾರಂಭ ರಾಯಲ್ ಸಂಸ್ಥೆಯ ಆಶ್ರಯದಲ್ಲಿ 1906ರಲ್ಲಿ ಜುಲೈ 26ರಂದು ನಡೆಯಿತು. ಅಂದು ಪರ್ಕಿನ್ನನ ಭಾವಚಿತ್ರವನ್ನು ಅನಾವರಣಮಾಡಿ ಗೌರವಿಸಲಾಯಿತು. ಅದೇ ವರ್ಷ ಅವನಿಗೆ ನೈಟ್ ಪ್ರಶಸ್ತಿಯೂ ದೊರೆಯಿತು. ಇದಾದ ಒಂದು ವರ್ಷದಲ್ಲೇ 1907 ಜುಲೈ 14 ರಂದು ದಿವಂಗತನಾದ.
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ